ಕಕುತ್ಸ್ಥ : ಸೂರ್ಯವಂಶದ ಒಬ್ಬ ರಾಜ, ಇವನ ತಂದೆ ಶಶಾದ, ತಾತ ಇಕ್ಷ್ವಾಕು. ರಾಜಧಾನಿ ಅಯೋಧ್ಯೆ. ಈತನಿಗೆ ಇಂದ್ರವಾಹ, ಪುರಂಜಯ ಇತರ ಹೆಸರುಗಳು, ಅನೇನಸ್ ಈತನ ಮಗ.
ಕಕುತ್ಸ್ಥ ಎಂದರೆ ವೃಷಭದ ಹಿಣಿಲ (ಕಕುತ್) ಮೇಲೆ (ಸ್ಥ) ಕುಳಿತವನು ಎಂದರ್ಥ. ಹಿಂದೆ ದೇವದಾನವರ ಮಧ್ಯೆ ಭಯಂಕರ ಯುದ್ಧವಾಗಿ ದೇವತೆಗಳು ಪರಾಜಿತರಾಗ ಬೇಕಾಯಿತು. ಕೊನೆಗೆ ವಿಶ್ವಾತ್ಮನೂ ದೇವದೇವನೂ ಆದ ವಿಷ್ಣುವಿನ ಆದೇಶದಂತೆ ಸೂರ್ಯವಂಶದ ಈ ರಾಜನನ್ನು ದೇವತೆಗಳ ಸೈನ್ಯದ ಮಹಾದಂಡನಾಯಕ (ಪಾಷಿರ್ಣ್‌ಗ್ರಾಹ)ನಾಗುವಂತೆ ಪ್ರಾರ್ಥಿಸಿದರು. ಇಂದ್ರ ತನಗೆ ವಾಹನವಾಗುವುದಾದರೆ ತಾನು ಸಹಾಯ ಮಾಡುವೆನೆಂದು ಈತನೆನ್ನಲು ಇಂದ್ರ ಮಹಾವೃಷಭ ರೂಪಧಾರಿಯಾದ. ಆಗ ಆ ವೃಷಭದ ಹಿಣಿಲ ಮೇಲೆ ಕುಳಿತು ದಿವ್ಯಧನುವನ್ನು ಹಿಡಿದು, ದೇವತೆಗಳು ಜಯಜಯಕಾರ ಮಾಡುತ್ತಿರಲು ಕಕುತ್ಸ್ಥ, ನಿಶಿತವಾದ ಬಾಣಗಳ ವರ್ಷವನ್ನೇ ದಾನವರ ಮೇಲೆ ಸುರಿಸಿ ಯುಗಾಂತಾಗ್ನಿಯಂತೆ ಅವರ ಮೇಲೆ ಬಿದ್ದು ಅವರ ಪುರ, ಧನ ಮುಂತಾದುವುಗಳನ್ನು ಜಯಿಸಿ ವಜ್ರಪಾಣಿಗೆ ಕೊಟ್ಟ. ಅಂದಿನಿಂದ ಇವನಿಗೆ ಇಂದ್ರವಾಹ ಮತ್ತು ಪುರಂಜಯ ಎಂಬ ಹೆಸರುಗಳೂ ಅನ್ವರ್ಥವಾದುವು. ಈತನ ವಂಶದವರಿಗೆ-ಮುಖ್ಯವಾಗಿ ರಾಮಾಯಣದಲ್ಲಿ-ಕಾಕುತ್ಸ್ಥರೆಂದೂ ಹೆಸರಿದೆ.          	(ಸಿ.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ